ಹೆಣ್ಣು ಸಮಾಜದ ಕಣ್ಣು. ಆಕೆ ಹಲವಾರು ಸಮಸ್ಯೆಗಳ ನಡುವೆಯೂ ಸತತ ಪರಿಶ್ರಮದ ಮೂಲಕ ಎತ್ತರಕ್ಕೆ ಬೆಳೆಯುತ್ತಿದ್ದಾಳೆ. ಸೈನಾ ನೆಹ್ವಾಲ್, ಅರುಣಿಮಾ ಸಿನ್ಹಾ, ಮೇರಿ ಕಾಮ್, ಸುಧಾ ಮೂರ್ತಿ ಮುಂತಾದ ಹಲವಾರು ಮಹಿಳೆಯರು ಸಾಧನೆಯ ಗರಿಯನ್ನು ಎತ್ತಿ ಹಿಡಿದವರು. ಮಹಿಳೆಯರು ತಮ್ಮ ಸತತ ಪ್ರಯತ್ನದಿಂದಾಗಿ ಪುರುಷರಿಗೆ ಸಮಾನರಾಗಲು ಸಾಧ್ಯ ಎಂದು ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಕು.ಸ್ನೇಹಾ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ ’ಮಹಿಳೆಯರ ಸಾಧನೆ’ ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭ್ರೂಣಹತ್ಯೆ, ಅತ್ಯಾಚಾರಗಳ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯಬಹುದಾದ ಶೋಷಣೆಗಳನ್ನು ಯಾವ ಬಗೆಯಲ್ಲಿ ಕಡಿಮೆಗೊಳಿಸಬಹುದು ಎಂಬುದೇ ಈಗಿನ ಸಮಸ್ಯೆ. ವಿಶ್ವ ಸಂಸ್ಥೆ ಅಥವಾ ಆಯಾ ದೇಶಗಳು ಸಂದರ್ಭಕ್ಕನುಗುಣವಾಗಿ ಹೂಡುವ ಕಾನೂನುಗಳಿಂದ ಇದು ಕಡಿಮೆಯಾಗಿದೆ ಎಂದೆನಿಸಿದರೂ ಹೆಣ್ಣಿನ ಮೇಲಿನ ದೌರ್ಜನ್ಯ ಈಗಲೂ ಮುಂದುವರಿಯುತ್ತಿರುವುದು ಶೋಚನೀಯ. ಮನುಷ್ಯ ತನ್ನ ಸುತ್ತುಮುತ್ತಲಿನ ಮೇಲೆ ಅಧಿಕಾರವನ್ನು ಸ್ಥಾಪಿಸಲು ಹೊರಟಿರುವ ಈ ಸಂದರ್ಭದಲ್ಲಿ ಮಹಿಳೆ ಉತ್ತಮ ಶಿಕ್ಷಣವನ್ನು ಪಡೆಯುವುದರ ಮೂಲಕ ಬಿಡುಗಡೆಯನ್ನು ಪಡೆಯಬಹುದು ಎಂದು ಅಭಿಪ್ರಾಯ ಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ದಾಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಲಾ ವಿಭಾಗದ ವಿದ್ಯಾರ್ಥಿಗಳಾದ ರಂಜಿತ್, ದಿಶಾ, ಗೌತಮ್ ನಾಯಕ್, ಮತ್ತು ರಮ್ಯ ವಿಚಾರಗಳನ್ನು ಮಂಡಿಸಿದರು. ರಚನಾ ನಿರೂಪಿಸಿದರು. ಆಶ್ರಯ್ ಸ್ವಾಗತಿಸಿ, ರಿತೇಶ್ ಹೆಗ್ಡೆ ವಂದಿಸಿದರು.