ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ವೇದವ್ಯಾಸ ರಾಮಕುಂಜ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯವಿದೆ. ಕ್ರೀಡೆಯ ಮುಂದಿನ ಹಂತದ ಸ್ಪರ್ಧೆಗಳಿಗೆ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ ದಾಸ್ ಮಾತನಾಡಿ ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು ಎಂದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪಿ.ಕೆ. ಪರಮೇಶ್ವರ ಶರ್ಮ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರವಿಶಂಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಕ್ರೀಡಾ ಸಂಘದ ಕಾರ್ಯದರ್ಶಿ ಪ್ರತೀಕ್ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿನಿ ವೀಕ್ಷಿತಾ ಅತಿಥಿಗಳನ್ನು ಸ್ವಾಗತಿಸಿದರು. ಕ್ರೀಡಾ ಸಂಘದ ಜತೆಕಾರ್ಯದರ್ಶಿ ರಕ್ಷಿತಾ ವಂದಿಸಿದರು.