ಆಲೋಚನೆ ಮತ್ತು ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ: ರೂಪಾ. ಟಿ. ಶೆಟ್ಟಿ
ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು, ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಬಂಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊಂದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಪುತ್ತೂರು ನಗರಸಭೆಯ ಆಯುಕ್ತರಾದ ರೂಪಾ. ಟಿ. ಶೆಟ್ಟಿ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2019-20 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಶಾಲಾ ಕಾಲೇಜು ಮಟ್ಟದ ಕ್ರೀಡಾ ಕೂಟಗಳಿಂದ ಸ್ನೇಹ ಸೌಹಾರ್ದತೆಗಳು ಏರ್ಪಡುತ್ತವೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬಂಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಸಂಯಮ, ಇಚ್ಛಾಶಕ್ತಿ, ಸ್ವಾಭಿಮಾನ, ಏಕಾಗ್ರತೆಗಳನ್ನು ಬೆಳೆಸುತ್ತದೆ. ಸೋಲೇ ಗೆಲುವಿನ ಸೋಪಾನ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಕೂಡ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತವೆ ಎಂದರು.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆನಂದಪ್ರಭು, ದೀಕ್ಷಾ, ಹೃತಿಕ್, ಕಾವ್ಯಶ್ರೀ, ರಶ್ಮಿತಾ, ಶ್ರೀನಿಧಿ, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋಹಿತ್, ಯಶವಂತ್, ಪೃಥ್ವಿರಾಜ್, ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡ ಸಂಪತ್ ಹೆಗಡೆ ಕ್ರೀಡಾಜ್ಯೋತಿಯನ್ನು ತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಕರ್ಷಕ ಪಥಸಂಚಲನ:
ಸುಮಾರು 27 ತರಗತಿಗಳ ಶಿಸ್ತುಬದ್ಧ ಪಥ ಸಂಚಲನ ನಡೆಯಿತು. ದ್ವಿತೀಯ ವಾಣಿಜ್ಯದ ’ಸಿ’ ವಿಭಾಗವು ಪ್ರಥಮ ಸ್ಥಾನವನ್ನೂ ದ್ವಿತೀಯ ವಾಣಿಜ್ಯ ’ಬಿ’ ವಿಭಾಗವು ದ್ವಿತೀಯ ಸ್ಥಾನವನ್ನೂ ದ್ವಿತೀಯ ವಿಜ್ಞಾನದ ’ಜಿ’ ವಿಭಾಗವು ತೃತೀಯ ಬಹುಮಾನವನ್ನೂ ಪಡೆದುಕೊಂಡಿತು. ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ, ಯತೀಶ್, ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಪರಮೇಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ರೀಡಾ ಸಂಘದ ಕಾರ್ಯದರ್ಶಿ ಸಂಪತ್ ಹೆಗಡೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾಲೇಜಿನ ಕ್ರೀಡಾ ಸಂಘದ ಜತೆಕಾರ್ಯದರ್ಶಿ ದೀಕ್ಷಾ ಕೆ ಸ್ವಾಗತಿಸಿ ಕ್ರೀಡಾ ಕಾರ್ಯದರ್ಶಿ ಸಂಪತ್ ಹೆಗಡೆ ವಂದಿಸಿದರು.