ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಬನ್ನೂರಿನ ಕಜೆ (ಬೇರಿಕೆ) ಅಂಗನವಾಡಿಯಲ್ಲಿ ಇತ್ತೀಚೆಗೆ ಗ್ರಾಮವಿಕಾಸ ಯೋಜನೆ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ಎ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬನ್ನೂರಿನ ನಿವಾಸಿ ಕಲ್ಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾದ ಯಶಸ್ನ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಹಲವಾರು ಚಟುವಟಿಕೆಗಳನ್ನು ಅಲ್ಲಿ ನೆರೆದಿದ್ದ ಮಕ್ಕಳ ಮೂಲಕ ಮಾಡಿಸಿದರು.
ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿ ಅನಾಗ ಮಾತನಾಡಿ ಉತ್ತಮ ಸಂಸ್ಕೃತಿ – ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು.ಬದುಕುವ ಕಲೆಯನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಹೋದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ.ನಾವು ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ.ಸುಮಾರು ೪೦ಕ್ಕೂ ಹೆಚ್ಚು ವಿವಿಧ ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಟ, ರಸಪ್ರಶ್ನೆ, ಗಣಿತಪಾಠ, ಚಿತ್ರಕಲೆ, ಕ್ರಾಫ್ಟ್, ಕುಣಿತ ಭಜನೆ ಹಾಗೂ ಇನ್ನಿತರ ಶೈಕ್ಷಣಿಕ ಹಾಗೂ ಮನೋರಂಜನೆಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.
ರಸಪ್ರಶ್ನೆಯಲ್ಲಿ ವಿಜೇತ ತಂಡಕ್ಕೆ ಹಾಗೂ ಆಟದಲ್ಲಿ ವಿಜೇತ ವಿದ್ಯಾರ್ಥಿನಿ ರಕ್ಷಿತಾ ಇವರಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯರು ಬಹುಮಾನವನ್ನು ನೀಡಿ ಅಭಿನಂದಿಸಿದರು. ಯಶಸ್ನ ವಿದ್ಯಾರ್ಥಿಗಳಾದ ಕೌಶಿಕ್ ಜಿ.ಎನ್ ಸ್ವಾಗತಿಸಿ, ಅರುಣ್ ಕಿರಿಮಂಜೇಶ್ವರ ವಂದಿಸಿದರು. ಯಶಸ್ನ ವಿದ್ಯಾರ್ಥಿನಿ ಸುಮಂಗಲ ಕಾರ್ಯಕ್ರಮವನ್ನು ನಿರೂಪಿಸಿದರು.