ವೀರ ಯೋಧರ ತ್ಯಾಗ ಅನುಕರಣೀಯ- ಆದರ್ಶ ಗೋಖಲೆ
ದೇಶದ ಗಡಿಯಲ್ಲಿ ನಮ್ಮ ಯೋಧರು ತಮ್ಮ ಎದೆಯನ್ನು ವೈರಿಗಳಿಗೊಡ್ಡಿ ಧೈರ್ಯದಿಂದ ವೀರಮರಣ ಹೊಂದಿದ್ದಾರೆ. ಇಂತಹ ವೀರ ಯೋಧರ ಯಶೋಗಾಥೆಗಳ ಸಾಲಿನಲ್ಲಿ ನಿಲ್ಲುವಂತಹ ವೀರ ಯೋಧರ ತ್ಯಾಗ ಅನುಕರಣೀಯ ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು-2018 ಪ್ರಯುಕ್ತ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಸೈನಿಕರ ಸ್ಮರಣೆ ಮತ್ತು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಮೇರಾ ಭಾರತ್ ಮಹಾನ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಎಂಬ ಸಂಪತ್ತನ್ನು ಗಳಿಸಿಕೊಡಲು ಅದರ ಪೂರ್ವದಲ್ಲಿ ಎಷ್ಟೋ ಜನ ಮಹಾತ್ಮರು ತಮ್ಮ ಪ್ರಾಣ ತ್ಯಾಗ ಮಾಡಲು ಹಿಂಜರಿಯಲಿಲ್ಲ. ಅವರ ಆ ಬಲಿದಾನದ ಫಲವಾಗಿ ಈ ಸಂಪತ್ತನ್ನು ತಲೆಮಾರಿಗೆ ಸಾಗುತ್ತಾ ಬಂದಿದೆ. ಏಳು ದಶಕಗಳಿಗೂ ಹೆಚ್ಚಾದ ಈ ಸ್ವಾತಂತ್ರ್ಯ ಸಂಪತ್ತಿನ ತೇರು ಎಳೆತಂದವರು ಅಸಂಖ್ಯಾತ ದೇಶಪ್ರೇಮಿಗಳು. ಯುದ್ಧದಲ್ಲಿ ದೇಶ ಕಾಯುವ ಯೋಧರು ತಮ್ಮ ಕಾರ್ಯದಲ್ಲಿ ಕಾರ್ಯನಿರತರಾದ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ. ನಮ್ಮೆಲ್ಲರ ಕುಟುಂಬಗಳು ಸಂತೋಷವಾಗಿರಲು ತಮ್ಮ ಮಡದಿ ಮಕ್ಕಳ ಸಂತೋಷವನ್ನು ಬಲಿ ಕೊಟ್ಟ ಹುತ್ಮಾತ ಸೈನಿಕರನ್ನು ಕಿಂಚಿತ್ತಾದರೂ ಸ್ಮರಿಸಿಕೊಂಡರೆ ನಾವು ಉಸಿರಾಡುವ ಗಾಳಿ ನಿಂತನೆಲದ ನೆಮ್ಮದಿಯ ನಿದ್ರೆಯ ಫಲವನ್ನು ಅರಗಿಸಿಕೊಂಡತಾಗುತ್ತದೆ. ನಾವಿಂದು ಸುಖಕರವಾಗಿ ಜೀವನ ನಡೆಸಲು ನಮ್ಮ ಯೋಧರು ನಿಜವಾಗಿಯೂ ನಮ್ಮೆಲ್ಲರ ಹೀರೋ.ಬದಲಿಗೆ ಮಕ್ಕಳ ಹೀರೋ ಅಂದರೆ ಯಾರೋ ಕ್ರಿಕೆಟ್ ಆಟಗಾರರು, ಸಿನೆಮಾನಟರು ಆಗಿಬಿಟ್ಟಿದ್ದಾರೆ. ಮಕ್ಕಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಗಡಿಕಾಯುವ ಯೋಧನನ್ನು ತಮ್ಮ ಆದರ್ಶ ವ್ಯಕ್ತಿಯಾಗಿ ಆರಿಸಿಕೊಳ್ಳಬೇಕಿದೆ. ಸೈನಿಕರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಜೀವನಗಾಥೆಗಳನ್ನು ಇತರರೊಂದಿಗೆ ಹಂಚಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ಕೈಗೂಡಿಸಬೇಕು ಎಂದರು.
ವಿಶೇಷ ಸನ್ಮಾನ:
ಮಾಜಿ ಸೈನಿಕರಾದ ಆರ್ಯಾಪು ಗ್ರಾಮದ ಲೋಕೇಂದ್ರ ಗೌಡ, ನೆಹರೂನಗರದ ಪುರಂದರ ನಾಯ್ಕ, ಜಗನ್ನಾಥ ಶೆಟ್ಟಿ, ಉಪ್ಪಿನಂಗಡಿಯ ಜತ್ತಪ್ಪ ನಾಯ್ಕ, ಬನ್ನೂರಿನ ಪುರಂದರ ಡಿ., ಇಡ್ಕಿದು ಗ್ರಾಮದ ಕುಞಣ್ಣ ಗೌಡ, ಬೆಂಗಳೂರಿನ ಯಲಹಂಕದ ಚಂದ್ರಶೇಖರ, ಸುಳ್ಯದ ಐವತ್ತೊಕ್ಲುನ ಜತ್ತಪ್ಪ ಗೌಡ, ಬಂಟ್ವಾಳದ ಮಂಗಿಲಪದವುನ ಬಾಲಕೃಷ್ಣ ಗೌಡ ಇವರಿಗೆ ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಪ್ರಸ್ತುತ ಕಲರ್ಸ್ ಸೂಪರ್ ಚಾನಲ್ನ ಕನ್ನಡ ಕೋಗಿಲೆಯ ಸ್ಪರ್ಧಿ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಖಿಲಾ ಪಜಿಮಣ್ಣು ದೇಶಕ್ಕಾಗಿ ಹೋರಾಡಿ ಬಲಿದಾನ ಮಾಡಿದ ಸೈನಿಕರ ಕುರಿತಾದ ಹಾಡೊಂದು ಹಾಡಿದರು. ಇವರನ್ನು ಕಾಲೇಜಿನ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಕೆ. ಮುದೂರ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಸಂಚಾಲಕ ಸಂತೋಷ್ ಬಿ.ಸದಸ್ಯ ರವಿ ಮುಂಗ್ಲಿಮನೆ ಪ್ರಾಂಶುಪಾಲ ಜೀವನ್ದಾಸ್ ಉಪಸ್ಥಿತರಿದ್ದರು. ಕಾಯಕ್ರಮವನ್ನು ಉಪನ್ಯಾಸಕಿ ಪುಷ್ಪಲತಾ ನಿರೂಪಿಸಿ ದಯಾಮಣಿ ವಂದಿಸಿದರು.