ಕನಸುಗಳ ಪರಿಧಿ ವಿಸ್ತಾರವಾಗಿ ಕನಸು ನನಸಾಗಲಿ. ಇದರಿಂದ ವಿದ್ಯಾರ್ಥಿಗಳ, ಪೋಷಕರ ಕನಸು ನನಸಾಗುತ್ತದೆ ಎಂದು ಖ್ಯಾತ ವಿಜ್ಞಾನಿಯಾದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2016 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳ ಜೊತೆಜೊತೆಗೆ ಸವಲತ್ತುಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳ ಪ್ರಯತ್ನ ನಿರಂತರವಾಗಿರಬೇಕು. ವ್ಯಕ್ತಿ ದೇಶಕ್ಕೆ ಕೊಡುಗೆ ನೀಡಬೇಕಾದರೆ ವಿಜ್ಞಾನಿಯೇ ಆಗಬೇಕೆಂದಿಲ್ಲ. ಯಾವುದೇ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದರೂ ತನ್ನ ಕನಸನ್ನು ನನಸಾಗಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ.ಸುಧಾ ಎಸ್ .ರಾವ್ ಮಾತನಾಡಿ ಋಣಾತ್ಮಕ ಅಂಶಗಳನ್ನು ಬಿಟ್ಟು ಧನಾತ್ಮಕ ಅಂಶಗಳೆಡೆಗೆ ವಿದ್ಯಾರ್ಥಿಗಳು ಗಮನ ಕೊಡಬೇಕು. ಈ ಮೂಲಕ ನಮ್ಮ ಕನಸುಗಳನ್ನು ಯಶಸ್ವಿಗೊಳಿಸಿ ಮುಂದಿನ ಒಳ್ಳೆಯ ಪ್ರಜೆಗಳಾಗಿ ಬಾಳಬೇಕು ಎಂದು ಶುಭ ಹಾರೈಸಿದರು.
ಖ್ಯಾತ ಅಂಕಣಕಾರರಾದ ಶ್ರೀ ಡ್ಯಾನಿ ಪಿರೇರಾ ಮಾತನಾಡಿ ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮಲು ಸಾಧ್ಯ. ಉತ್ತಮ ನಡತೆ, ವ್ಯಕ್ತಿತ್ವ ರೂಪುಗೊಳ್ಳುವ ಮೂಲಕ ಭಾರತವು ಜಗದ್ಗುರು ಆಗಬೇಕೆಂದುಕೊಂಡ ಸುಂದರ ಕನಸು ಈಡೇರಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ, ಸಂಚಾಲಕರಾದ ಶ್ರೀ ಸಂತೋಷ್ ಬಿ, ಪ್ರಾಂಶುಪಾಲರಾದ ಶ್ರೀ ಜೀವನ್ದಾಸ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ರೀನಿವಾಸ ಭಟ್, ರವಿ ಮುಂಗ್ಲಿಮನೆ ಮೊದಲಾದವರು ಉಪಸ್ಥಿತರಿದ್ದರು.
ರಸಾಯನಶಾಸ್ರದ ಉಪನ್ಯಾಸಕಿ ಶ್ರೀಮತಿ ದಯಾಮಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪರಮೇಶ್ವರ ಶರ್ಮ ಸ್ವಾಗತಿಸಿ ವಂದಿಸಿದರು.