ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಭಗವಂತನಲ್ಲಿ ಶ್ರದ್ಧೆ ಮೂಡಲು ಸಾಧ್ಯ. ತ್ಯಾಗ ಮತ್ತು ಸೇವೆಯ ಮೂಲಕ ಭಾರತಮಾತೆಯನ್ನು ಪೂಜಿಸಿದಾಗ ಉಳಿದದ್ದೆಲ್ಲ ತಾನಾಗಿಯೇ ಸರಿಹೋಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಠ ಇವರು ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆಯ ಪ್ರಯುಕ್ತ 125 ಕಾಲೇಜುಗಳಲ್ಲಿ ಸೆಪ್ಟೆಂಬರ್ 2018 -ಸೆಪ್ಟೆಂಬರ್ 2019 ರವರೆಗೆ ನಡೆಸಲು ಉದ್ದೇಶಿಸಿರುವ ವಿಶ್ವ ವಿಜೇತಕಾರ್ಯಕ್ರಮದ 37 ನೇ ಕಾರ್ಯಕ್ರಮವಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರದು ಬಹುಮುಖ ವ್ಯಕ್ತಿತ್ವ, ಬಹುಮುಖ ಪ್ರತಿಭೆ.ಅವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಕ್ರಿಯಾಶೀಲ ಜೀವನ ಮತ್ತು ಶಕ್ತಿಯುತ ಸಂದೇಶಗಳು ಭಾರತಕ್ಕೆ ಮಾರ್ಗದರ್ಶನ ನೇಡಿದವು. ವಿವೇಕಾನಂದರು ಕೇವಲ ನಮ್ಮ ಹೃದಯದಲ್ಲಿ ಮಾತ್ರ ನೆಲೆಸಿರುವುದಲ್ಲ, ಅವರು ಎಲ್ಲೆಲ್ಲಿಯೂ ನೆಲೆಸಿರುವರು. ವಿಶ್ವಚಿಂತನೆಯಲ್ಲಿ ತಮ್ಮ ಮುದ್ರೆಯನ್ನು ಒತ್ತಿ ಹೋಗಿರುವರು. ಅವರ ಕಾರ್ಯಪ್ರಣಾಳಿಯನ್ನು ಅವರೇ ಸ್ಥಾಪಿಸಿದ ರಾಮಕೃಷ್ಣ ಮಠ ಮತ್ತು ಮಿಷನ್ ಅವಳಿ ಸಂಸ್ಥೆಯು ಮುಂದುವರಿಸಿಕೊಂಡು ಹೋಗುತ್ತಿವೆ ಎಂದರು.
ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ವಂದಿಸಿದರು.