ಸಂಗೀತದಲ್ಲಿ ಲಕ್ಷ್ಯವು ಬೆಳೆದಂತೆಲ್ಲ ಅದಕ್ಕನುಗುಣವಾದ ಲಕ್ಷಣವೂ ಸಿದ್ಧ- ಆಶಾ ಬೆಳ್ಳಾರೆ
ಸಂಗೀತ ಕಲೆಯು ಸಮಸ್ತ ಜೀವರಾಶಿಗಳನ್ನು ಮೋಡಿ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತದೆ. ಸಂಗೀತದಲ್ಲಿ ಲಕ್ಷ್ಯವು ಬೆಳೆದಂತೆಲ್ಲ ಅದಕ್ಕನುಗುಣವಾದ ಲಕ್ಷಣವೂ ಸಿದ್ಧವಾಗುವುದು. ಸಂಗೀತ ಶಾಸ್ತ್ರದ ಅರಿವು ಕಲಾಪ್ರಯೋಗವನ್ನು ಸುಂದರಗೊಳಿಸಿ ಶ್ರಾವ್ಯವಾಗಿಸಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿ ಶಾಸ್ತ್ರೀಯವೆನಿಸಿ ಸಂಪ್ರದಾಯ ಸಂಗೀತವೆಂಬ ಹೆಗ್ಗಳಿಕೆಗೆ ಪಾತ್ರವಾಗುವುದು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ಸ್ವರಜತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸಂಗೀತ ಉನ್ನತ ಮಟ್ಟದಲ್ಲಿದೆ. ಕಲಾ ಕೌಶಲವನ್ನು ಜಾಗೃತಗೊಳಿಸುವ ಈ ಸಂಗೀತವು ಮೆದುಳಿನ ಸರ್ವತೋಮುಖ ಬೆಳವಣಿಗೆಗೆ ಚೇತೋಹಾರಿಯಾಗಿದೆ. ಮೆದುಳನ್ನು ಚುರುಕುಗೊಳಿಸುವ ಕೆಲವೇ ಸಾಧನಗಳಲ್ಲಿ ಸಂಗೀತದ ಪಾತ್ರವು ಹಿರಿದು. ನವನವೀನವಾದ ಕಲ್ಪನೆಗಳಿಗೆ ಮೀಸಲಾದ ಈ ಸಂಗೀತವು ತಾತ್ಕಾಲಿಕವಾಗಿ ವಾಗ್ಗೇಯಕಾರನ ಮಟ್ಟಕ್ಕೆ ಏರಿಸುತ್ತದೆ. ಪ್ರಪಂಚದ ಎಲ್ಲ ಸಂಗೀತಕ್ಕಿಂತಲೂ ಭಾರತೀಯ ಸಂಗೀತದ ಮೌಲ್ಯ ಹೆಚ್ಚು. ಸಂಗೀತ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಸಂಗೀತದ ಸಾಂಸ್ಕೃತಿಕ , ಸಾಮಾಜಿಕ ಮೌಲ್ಯ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ರವಿಮಂಗ್ಲಿಮನೆ ,ಶ್ರೀನಿವಾಸ ಭಟ್, ಪ್ರಾಂಶುಪಾಲ ಜೀವನ್‌ದಾಸ್ ಉಪಸ್ಥಿತರಿದ್ದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಗಳಾದ ಭಾಮಿನಿ ಭಟ್, ಹರ್ಷಿತಾ ವರ್ಣಿಕಾ, ವೈಷ್ಣವಿ ಕೆ.ಬಿ, ಅನುಜ್ಞಾ ಕರ್ನಾಟಕ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಮೃದಂಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೀರಾಮ್ ಭಟ್ ಮತ್ತು ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಿದ್ದರು. ಉಪನ್ಯಾಸಕಿ ಅಕ್ಷತಾ ನಿರೂಪಿಸಿ ವಂದಿಸಿದರು.